🔥 Follow our WhatsApp Channel! ×
WhatsApp
Loading Now

ಕುಂಪಣಮಜಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ

ಬಂಟ್ವಾಳ: ತಾಲೂಕಿನ ಫರಂಗಿಪೇಟೆ ಸಮೀಪದ ಕುಂಪಣಮಜಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವು ಗುರುವಾರ ಭಕ್ತಿಭಾವದಿಂದ ನೆರವೇರಿತು.

ವಾಸ್ತುಶಿಲ್ಪಿ ರಮೇಶ್ ಕಾರಂತ ಅವರ ಮಾರ್ಗದರ್ಶನದಲ್ಲಿ, ಸುಜೀರು ಗಣೇಶ್ ಭಟ್ ಅವರ ಪೌರೋಹಿತ್ಯದಲ್ಲಿ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಭೂಮಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸದಾನಂದ ಆಳ್ವ ಕಂಪ, ಶ್ರೀಮಂತ ರಾಜಗುಳಿಗ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ, ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷ ರಜತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಮಾರ್ ಮಲೆಮಾರ್, ಧರ್ಮದರ್ಶಿ ಸುನೀಲ್ ಕುಮಾರ್ ಸೇರಿದಂತೆ ಸೇವಾ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಭಕ್ತರು ಭಾಗವಹಿಸಿದರು.

ಈ ಕ್ಷೇತ್ರವು ಪುರಾತನ ಹಿನ್ನೆಲೆಯನ್ನು ಹೊಂದಿದ್ದು, ಅನಾದಿಕಾಲದಿಂದ ಋಷಿಮುನಿಗಳು ಇಲ್ಲಿ ದೇವಿಶಕ್ತಿಯನ್ನು ಆರಾಧಿಸುತ್ತಿದ್ದರು ಎಂಬ ನಂಬಿಕೆ ಇದೆ. ನಂತರದ ಕಾಲದಲ್ಲಿ ಆದಿವಾಸಿ ಕಾಡು ಜನಾಂಗದವರಿಂದಲೂ ಶಕ್ತಿ ಆರಾಧನೆ ನಡೆಯುತ್ತಾ ಬಂದಿತ್ತು. ಬಳಿಕ ಗಿರಿಜಾ ಎಂಬವರು ತಮ್ಮ ಮನೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರನ್ನು ಪೂಜಿಸುತ್ತಿದ್ದು, ಅವರ ಪುತ್ರರಾದ ಇಂದಿನ ಧರ್ಮದರ್ಶಿ ಸುನೀಲ್ ಕುಮಾರ್ ಅವರು ಆ ಆರಾಧನೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕ್ಷೇತ್ರದಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರೊಂದಿಗೆ ಶ್ರೀ ಮಹಾಗಣಪತಿ, ಶ್ರೀ ಬಂಗಾರ ಮಂತ್ರದೇವತೆ, ಶ್ರೀ ಚಾಮುಂಡೇಶ್ವರೀ, ಶ್ರೀ ಮಹಾಕಾಳಿ, ಶ್ರೀ ರಕ್ತೇಶ್ವರೀ, ಶ್ರೀ ಮಾರಿಯಮ್ಮ, ಶ್ರೀ ನಾಗದೇವರು, ಶ್ರೀ ಶನೈಶ್ಚರ, ಶ್ರೀ ಕಾಳಭೈರವ, ಸ್ವಾಮಿ ಕೊರಗ ತನಿಯ, ರಾಹುಗುಳಿಗ, ಕಲ್ಲುರ್ಟಿ-ಪಂಜುಲಿ ಸೇರಿದಂತೆ ಸಪರಿವಾರ ದೈವಗಳ ಸಾನಿಧ್ಯವಿದೆ. ಭಕ್ತರ ಸಂಖ್ಯೆ ಹೆಚ್ಚಾದಂತೆ ಸೇವಾ ಚಟುವಟಿಕೆಗಳು ವಿಸ್ತರಿಸಿಕೊಂಡು, ನಿತ್ಯ ತ್ರಿಕಾಲ ಪೂಜೆ, ಸಂಕ್ರಮಣ ಸೇವೆ, ದುರ್ಗಾ ನಮಸ್ಕಾರ ಪೂಜೆ ಹಾಗೂ ವಿವಿಧ ದೈವಗಳಿಗೆ ನರ್ತನ ಸೇವೆಗಳು ನಡೆಯುತ್ತಿವೆ.

ಪ್ರಸ್ತುತ ಅಮ್ಮನವರ ಅನುಗ್ರಹ ಮತ್ತು ಭಕ್ತರ ಅಪೇಕ್ಷೆಯಂತೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ, ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆಯೊಂದಿಗೆ ಚಾಲನೆ ನೀಡಲಾಗಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading