🔥 Follow our WhatsApp Channel! ×
WhatsApp
Loading Now

ಕಾವ್ಯಶ್ರೀ ಅಜೇರು, ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಪ್ರಶಸ್ತಿ

ಕಾರ್ಕಳ ತಾಲೂಕಿನ ಹಿರ್ಗಾನದ ಕುಂದೇಶ್ವರ ಉತ್ಸವದ ಅಂಗವಾಗಿ ಕುಂದೇಶ್ವರ ಸಮ್ಮಾನ್ ಹಾಗೂ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗಳ ಪ್ರದಾನ ಸಮಾರಂಭವು ಭಾನುವಾರ ನೆರವೇರಿತು. ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನೂ, ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೆಗಳಂತಹ ಪರಂಪರಾ ಕಲಾವಿಧಗಳನ್ನು ಆಯೋಜಿಸಿ ಸಾಧಕ ಕಲಾವಿದರನ್ನು ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದರು. ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಕುಂದೇಶ್ವರ ಕ್ಷೇತ್ರವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಅಭಿಪ್ರಾಯಪಟ್ಟರು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಕ್ಷೇತ್ರದ ಮೂಲಸೌಕರ್ಯ ವೃದ್ಧಿಗಾಗಿ ದೇವಸ್ಥಾನದ ಸಂಪರ್ಕ ರಸ್ತೆಗಳನ್ನ ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಕಾವ್ಯಶ್ರೀ ಅಜೇರು ಮಾತನಾಡಿ, ಇಂತಹ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವುದು ತಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಪ್ರಾಂಜಲ ಮನಸ್ಸಿನಿಂದ ಕಲಾಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದರು. ಉಮೇಶ್ ಮಿಜಾರು ಮಾತನಾಡಿ, ಪುಣ್ಯಕ್ಷೇತ್ರಗಳಲ್ಲಿ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ಗೌರವ ನೀಡುವುದರಿಂದ ರಂಗಕಲೆಗಳಿಗೆ ಹೆಚ್ಚಿನ ಉತ್ತೇಜನ ಲಭಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿಟ್ಟೆ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ನಾಯಕ್, ಧರ್ಮದರ್ಶಿಗಳಾದ ಗಂಗಾ ಆರ್. ಭಟ್, ಪ್ರಧಾನ ಅರ್ಚಕರಾದ ಕೃಷ್ಣರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾವಿದ್ಯಾಲಯದ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್, ಉದ್ಯಮಿ ಸತೀಶ್ ಭಟ್ ಕುಂದೇಶ್ವರ, ಸಿರಿಯಣ್ಣ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ಅರ್ಚಕರಾದ ಸುಧೀಂದ್ರ ಭಟ್ ಹಾಗೂ ಸುಜ್ಞೇಂದ್ರ ಭಟ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಗೌರವಿಸಲಾಯಿತು. ದೇಗುಲದ ದ್ವಾರಕ್ಕೆ ಹಿತ್ತಾಳೆ ಹೊದಿಕೆ ಸಮರ್ಪಿಸಿದ ರಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಗಿಣಿ ಉಪೇಂದ್ರ ರಾವ್ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕಾವ್ಯಶ್ರೀ ಅಜೇರು ಮತ್ತು ಲಕ್ಷ್ಮೀ ನಾರಾಯಣ ಹೊಳ್ಳ ದ್ವಂದ್ವ ಭಾಗವತಿಕೆಯಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ ತಾಳಮದ್ದಲೆ ನಡೆಯಿತು. ನಿರ್ದೇಶನ ಮಾಡಿದ ರಾಮಚಂದ್ರ ಭಟ್ ಎಲ್ಲೂರು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಹಾಗೂ ನ್ಯೂಸ್ ಕಾರ್ಕಳ ಸಂಪಾದಕ ರಾಮಚಂದ್ರ ಬರೇಪ್ಪಾಡಿ ಸನ್ಮಾನಿಸಿದರು. ರಂಜಿನಿ ಲಕ್ಷ್ಮೀನಾರಾಯಣ ಅವರು “ದಾಕ್ಷಾಯಿಣಿ” ಏಕಪಾತ್ರಾಭಿನಯ ಪ್ರದರ್ಶಿಸಿದ್ದು, ನಮ್ಮ ಬೆದ್ರ ಕಲಾವಿದರಿಂದ ಪ್ರದರ್ಶಿತವಾದ “ವೈರಲ್ ವೈಶಾಲಿ” ತುಳು ನಾಟಕವು ಜನಮೆಚ್ಚುಗೆಗೆ ಪಾತ್ರವಾಯಿತು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading