🔥 Follow our WhatsApp Channel! ×
WhatsApp
Loading Now

ಮಾಣೂರು ಬ್ರಹ್ಮಕಲಶಾಭಿಷೇಕ ಹಸಿರು ಹೊರೆ ಕಾಣಿಕೆ

ಮಂಗಳೂರು ನೀರುಮಾರ್ಗ ಸಮೀಪದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನೆರವೇರಿತು. ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನೀರುಮಾರ್ಗ ಜಂಕ್ಷನ್‌ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಾಣೂರು ಕ್ಷೇತ್ರದ ತಂತ್ರಿಗಳಾದ ವೇದವ್ಯಾಸ ತಂತ್ರಿ ಶಿಬರೂರು ಅವರು ಹೊರೆಕಾಣಿಕೆ ಸಮರ್ಪಣೆಯ ಮಹತ್ವವನ್ನು ವಿವರಿಸಿ, ಇದರ ಮೂಲಕ ಗ್ರಹಚಾರ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ ಎಂದರು. ಬ್ರಹ್ಮಕಲಶೋತ್ಸವದ ಮೂಲಕ ಸುಬ್ರಾಯ ದೇವರ ಅನುಗ್ರಹ ಎಲ್ಲೆಡೆ ಹರಡಲಿ, ಸುಭಿಕ್ಷೆ ನೆಲೆಸಲಿ ಎಂದು ಹಾರೈಸಿದರು. ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಅವರು ಕಟೀಲು ಮತ್ತು ನೀರುಮಾರ್ಗ ಕ್ಷೇತ್ರಗಳ ಅವಿನಾಭಾವ ಸಂಬಂಧವನ್ನು ಸ್ಮರಿಸಿ, ಬ್ರಹ್ಮಕಲಶೋತ್ಸವದಿಂದ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗಿ ಊರಿಗೆ ಮಾತ್ರವಲ್ಲದೆ ರಾಜ್ಯ ಹಾಗೂ ದೇಶಕ್ಕೂ ಶುಭಫಲ ದೊರಕಲಿ, ಭಾರತ ವಿಶ್ವಗುರುವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಗುರುಪುರ ಗೋಳಿದಡಿ ಗುತ್ತುಗಡಿಕಾರ ವರ್ಧಮಾನ ಶೆಟ್ಟಿ, ಕುಡುಪು ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ ಕೆ., ಮಾಣೂರು ಕ್ಷೇತ್ರದ ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಪ್ರಧಾನ ಸಂಚಾಲಕ ಎಸ್. ಗಣೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ಕ್ಷೇತ್ರದ ಅರ್ಚಕ ರಾಜೇಶ್ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿ, ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಚೆಂಡೆ, ಕೊಂಬು, ಕಹಳೆ ವಾದ್ಯಗಳು, ಹಸುರು ಕೊಡೆಗಳ ಸಾಲು, ಕೀಲು ಕುದುರೆ, ಮಾತೆಯರಿಂದ ಪೂರ್ಣಕುಂಭ, ದೇವಳದ ವಾಹನ, ಭಜನಾ ಹಾಗೂ ನೃತ್ಯ ಭಜನಾ ತಂಡಗಳು, ಹುಲಿವೇಷ ಕಣಿತ ತಂಡ ಮತ್ತು ಹಸಿರು ಹೊರೆಕಾಣಿಕೆಯ ವಾಹನಗಳ ಸಾಲು ಮೆರವಣಿಗೆಯ ಮೆರಗು ಹೆಚ್ಚಿಸಿತು.

ಅಷ್ಟಬಂಧ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಹಿನ್ನೆಲೆಯಲ್ಲಿ ಫೆಬ್ರವರಿ 2ರಂದು ಮಾಣೂರು ಕ್ಷೇತ್ರದಲ್ಲಿ ಬೆಳಗ್ಗೆ 8ರಿಂದ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಹಾಗೂ ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ, ನಾಂದಿ ಪ್ರಯೋಗ, ಆದ್ಯ ಗಣಯಾಗ, ಪಂಚಗವ್ಯ ಹೋಮ, ವೇದತ್ರಯ ಪಾರಾಯಣ ಮತ್ತು ಕಂಕಣಬಂಧ ನಡೆಯಲಿದೆ. ಸಂಜೆ 5.30ರಿಂದ ಪಂಚಗವ್ಯ, ಭೂಶುದ್ಧ್ಯಾದಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ ಹಾಗೂ ಬಲಿ ವಿಧಾನಗಳು ನೆರವೇರಲಿದ್ದು, ಸಂಜೆ 7ರಿಂದ ಸ್ಥಳೀಯ ಪ್ರತಿಭೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading