ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಜ್ಜು – ಮಾ. 14ಕ್ಕೆ ಧ್ವಜಾರೋಹಣ
ಬಂಟ್ವಾಳ: ತಾಲೂಕಿನ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಸಡಗರ ಆರಂಭವಾಗಿದ್ದು, ಮಾ. 14ರಂದು ಧ್ವಜಾರೋಹಣ ಹಾಗೂ ಮಾ. 15ರಂದು ಜಾತ್ರೆಯ ಪ್ರಮುಖ ವಿಧಿವಿಧಾನಗಳು ನಡೆಯಲಿವೆ.
ಜಾತ್ರೆಯ ಅಂಗವಾಗಿ ಮಾ. 14ರಂದು ರಾತ್ರಿ ಸಂಪ್ರದಾಯಬದ್ಧವಾಗಿ ಧ್ವಜಾರೋಹಣ ನಡೆಯಲಿದೆ. ಬಳಿಕ ಮಾ. 15ರಂದು ಬೆಳಗ್ಗೆ ‘ಕುದಿ ಕರೆಯುವ’ ಸಂಪ್ರದಾಯ ನಡೆಯುತ್ತಿದ್ದು, ಇದರ ಆಧಾರದ ಮೇಲೆ ಜಾತ್ರೆಯ ಅವಧಿ, ಕೊಡಿ ಚೆಂಡು, ಮಹಾರಥೋತ್ಸವ ಹಾಗೂ ಆರಾಡದ ದಿನಾಂಕಗಳನ್ನು ನಿಗದಿಪಡಿಸಲಾಗುತ್ತದೆ.
ಧ್ವಜಾರೋಹಣಕ್ಕೂ ಮುನ್ನ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರಗಳು ಆಗಮಿಸಲಿವೆ. ಹಾಗೆಯೇ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರವು ಕ್ಷೇತ್ರಕ್ಕೆ ಬರಲಿದೆ. ಜಾತ್ರೆಯ ಪೂರ್ವಭಾವಿಯಾಗಿ ನಟ್ಟೋಜಿ ವಂಶದ ಮನೆತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಸರ ಬಳಿಗೆ ತೆರಳಿ ದಿನಾಂಕ ನಿಗದಿ ಮಾಡಿಕೊಂಡು ಬಳಿಕ ಪೊಳಲಿಗೆ ಆಗಮಿಸುವ ಸಂಪ್ರದಾಯವೂ ಇದೆ.
‘ಕಂಚಿಲ್’ (ಕಂಚುಬೆಳಕು) ಬಳಿಕ ‘ಕುದಿ ಲೆಪ್ಪುನಿ’ (ಕುದಿ ಕರೆಯುವುದು) ಎಂಬ ಸಂಪ್ರದಾಯದ ಮೂಲಕ ತುಳುವಿನಲ್ಲಿ ಮೂರು ಬಾರಿ ಜೋರಾಗಿ ಆರಾಡದ ದಿನವನ್ನು ಘೋಷಿಸಲಾಗುತ್ತದೆ. ಆರಾಡದ ಮಹಾರಥೋತ್ಸವಕ್ಕೂ ಮುನ್ನ ಐದು ದಿನಗಳ ಕಾಲ ಪ್ರಸಿದ್ಧ ‘ಪುರಾಲ್ಡ್ ಚೆಂಡು’ ಉತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ದಿನಾಂಕಗಳನ್ನು ಕುದಿ ಕರೆಯುವ ಸಂಪ್ರದಾಯದ ಮೂಲಕವೇ ನಿರ್ಧರಿಸಲಾಗುತ್ತದೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತೀಯಾ ಸಮಾಜದವರಿಗೆ ವಿಶೇಷ ಸೇವಾ ಅವಕಾಶವೂ ಲಭ್ಯವಿದೆ. ಧ್ವಜಾರೋಹಣದ ದಿನ ರಾತ್ರಿ ಶ್ರೀ ಭಗವತಿ ತೀಯಾ ಸಮಾಜದ ಕೇಂದ್ರವಾದ ನಂದ್ಯ ಕ್ಷೇತ್ರದಿಂದ ದೈವಗಳ ಭಂಡಾರವನ್ನು ಶ್ರೀ ಕ್ಷೇತ್ರ ಪೊಳಲಿಗೆ ತರಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply