ನಾಗಬ್ರಹ್ಮನ ಸನ್ನಿಧಿಯಲ್ಲಿ ಕುಡ್ಲದ ಪೊಣ್ಣು: ಬೇರುಗಳನ್ನು ಮರೆಯದ ಪೂಜಾ ಹೆಗ್ಡೆ
ಕಾಪು: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ, ತಮ್ಮ ಮೂಲಭೂಮಿಯಾದ ತುಳುನಾಡಿನ ಸಂಸ್ಕೃತಿಯೊಂದಿಗೆ ಹೊಂದಿರುವ ನಂಟನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕುತ್ಯಾರು ಮೂಲದ ಬೆಟ್ಟು ನಾಗಬ್ರಹ್ಮಸ್ಥಾನದಲ್ಲಿ ನಡೆದ ಪವಿತ್ರ ‘ಡೆಕ್ಕೆ ಬಲಿ’ ಸೇವೆಯಲ್ಲಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಸಿನಿಮಾ ಲೋಕದ ಗ್ಲಾಮರ್‌ಗಿಂತ ದೂರವಾಗಿ, ಸರಳತೆಯೊಂದಿಗೆ ಭಕ್ತರ ನಡುವೆ ಬೆರೆತ ಪೂಜಾ, ಅಲ್ಲಿ ನೆರೆದಿದ್ದವರ ಮನಗೆದ್ದು ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಾಡಿನಿಂದ ಆವೃತವಾದ ನಾಗಬನದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಸಂಪ್ರದಾಯಬದ್ಧವಾಗಿ ನೆರವೇರಿತು. ಕುಟುಂಬದ ಯಜಮಾನ ಜಯ ಶೆಟ್ರ ಅವರ ಸೇವೆಯಲ್ಲಿ, ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯರ ನೇತೃತ್ವದಲ್ಲಿ ನಾಗದರ್ಶನ ನಡೆಯಿತು.

ಇದೇ ಸಂದರ್ಭದಲ್ಲಿ ಕೃಷ್ಣ ಪ್ರಸಾದ್ ತಂಡದ ಡಮರು ಮೇಳದ ನಾದ ಮತ್ತು ನರ್ತನವು ಕಾರ್ಯಕ್ರಮದ ಭಕ್ತಿಭಾವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸಿತು. ಸಾಂಪ್ರದಾಯಿಕ ವಿಧಿವಿಧಾನಗಳ ನಡುವೆ ನಡೆದ ಈ ಪೂಜೆ, ನೆರೆದಿದ್ದ ಭಕ್ತರ ಮನದಲ್ಲಿ ಆಧ್ಯಾತ್ಮಿಕತೆಯ ವಿಶಿಷ್ಟ ಅನುಭವ ಮೂಡಿಸಿತು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಟಿಯೊಬ್ಬರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯದೇ, ಹಿರಿಯರ ನಂಬಿಕೆಗಳಿಗೆ ಗೌರವ ನೀಡಿ ಈ ರೀತಿಯ ನಾಗಾರಾಧನೆಯಲ್ಲಿ ಪಾಲ್ಗೊಂಡಿರುವುದು ತುಳುನಾಡಿನ ಸಂಸ್ಕೃತಿಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply