🔥 Follow our WhatsApp Channel! ×
WhatsApp
Loading Now

ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ಕೆ.ಎಸ್‌.ಆರ್‌.ಟಿಸಿ ಸಿಹಿ ಸುದ್ದಿ: 2,600 ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆ.

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆ.ಎಸ್‌.ಆರ್‌.ಟಿಸಿ) ಬರೋಬ್ಬರಿ 2,600 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ.

​ನರಕ ಚತುರ್ದಶಿ, ಬಲಿಪಾಡ್ಯಮಿ ಹಾಗೂ ವಾರಾಂತ್ಯದ ದಿನಗಳು ಒಟ್ಟಿಗೆ ಬಂದಿರುವುದರಿಂದ ನವೆಂಬರ್ 6 ರಿಂದ ನವೆಂಬರ್ 8 ರವರೆಗೆ ಬೆಂಗಳೂರಿನಿಂದ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಅದೇ ರೀತಿ ಹಬ್ಬ ಮುಗಿಸಿ ವಾಪಸಾಗುವ ಸಾರ್ವಜನಿಕರ ಅನುಕೂಲಕ್ಕಾಗಿ ನವೆಂಬರ್ 10 ಮತ್ತು 11 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು ಮತ್ತು ಅಂತರರಾಜ್ಯ ಮಾರ್ಗಗಳಿಗೆ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಪ್ರಮುಖ ಕೇಂದ್ರವಾಗಿದ್ದು, ಇಲ್ಲಿಂದ ಮಂಗಳೂರು, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ತಿರುಪತಿ, ಹೈದರಾಬಾದ್ ಮೊದಲಾದ ಊರುಗಳಿಗೆ ಬಸ್‌ಗಳು ಸಂಚರಿಸಲಿವೆ.

​ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ಹಾಗೂ ಮಡಿಕೇರಿ ಭಾಗಗಳಿಗೆ ಬಸ್‌ಗಳು ತೆರಳಲಿವೆ. ಇನ್ನು ಶಾಂತಿನಗರ ಟಿಟಿಎಂಸಿ ಬಸ್ ನಿಲ್ದಾಣದಿಂದ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಮೊದಲಾದ ಸ್ಥಳಗಳಿಗೆ ಪ್ರತಿಷ್ಠಿತ ಪ್ರೀಮಿಯಂ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ.

​ಇದಲ್ಲದೆ, ಮುಂಗಡ ಕಾಯ್ದಿರಿಸಿದ ಪ್ರಯಾಣಿಕರಿಗಾಗಿ ಶಾಂತಿನಗರ, ವಿಜಯನಗರ, ಯಶವಂತಪುರ, ಜಯನಗರ, ಮಲ್ಲೇಶ್ವರಂ 18ನೇ ಕ್ರಾಸ್, ಬಸವೇಶ್ವರನಗರ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಹಾಗೂ ಟಿನ್ ಫ್ಯಾಕ್ಟರಿ ನಿಲ್ದಾಣಗಳಿಂದಲೂ ಬಸ್‌ಗಳು ಹೊರಡಲಿವೆ. ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದಲೂ ಅಗತ್ಯಕ್ಕೆ ತಕ್ಕಂತೆ ವಿಶೇಷ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ನಿಗಮ ತಿಳಿಸಿದೆ.

​ಟಿಕೆಟ್ ಬುಕಿಂಗ್ ಹಾಗೂ ಆಕರ್ಷಕ ರಿಯಾಯಿತಿ…!

ಪ್ರಯಾಣಿಕರು ನಿಗಮದ ಅಧಿಕೃತ ವೆಬ್‌ಸೈಟ್ (www.ksrtc.karnataka.gov.in) ಮೂಲಕ ಸುಲಭವಾಗಿ ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳ ಪ್ರಮುಖ ಬುಕಿಂಗ್ ಕೌಂಟರ್‌ಗಳಲ್ಲೂ ಮುಂಗಡ ಟಿಕೆಟ್ ಸೌಲಭ್ಯ ಲಭ್ಯವಿದೆ.

​ಗುಂಪಾಗಿ ಪ್ರಯಾಣಿಸುವವರಿಗೆ ನಿಗಮವು ವಿಶೇಷ ರಿಯಾಯಿತಿ ಪ್ರಕಟಿಸಿದ್ದು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು ರಿಯಾಯಿತಿ ಸಿಗಲಿದೆ. ಹಾಗೆಯೇ ಹೋಗುವ ಮತ್ತು ಬರುವ (ರೌಂಡ್ ಟ್ರಿಪ್) ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ, ವಾಪಸ್ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ದೊರೆಯಲಿದೆ.

​ಬಸ್ ಹೊರಡುವ ನಿಖರ ಸಮಯ, ನಿಲ್ದಾಣ ಮತ್ತು ಪಿಕ್‌ಅಪ್ ಪಾಯಿಂಟ್‌ಗಳ ವಿವರಗಳನ್ನು ಮುಂಗಡ ಟಿಕೆಟ್‌ಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಈ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ಕೋರಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading