🔥 Follow our WhatsApp Channel! ×
WhatsApp
Loading Now

ಕಲಾವಿದ ಸೋಮನಾಥ ಚಿಟ್ಪಾಡಿ ಕೈಯಲ್ಲಿ ಮೃಣ್ಮಯ ರೂಪಿ ಶ್ರೀ ಕೃಷ್ಣನಿಗೆ ಅಂತಿಮ ಸ್ಪರ್ಷ.

ಪೊಡವಿಗೊಡೆಯ ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ಶ್ರೀಕೃಷ್ಣಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಅಷ್ಟಮಿ ಆಚರಣೆಯಲ್ಲಿ ಪೂಜಿಸಲ್ಪಡುವ ಮೃಣ್ಮಯ ಶ್ರೀಕೃಷ್ಣನು ಕಲಾವಿದ ಸೋಮನಾಥ ಚಿಟ್ಪಾಡಿ ಅವರ ಕೈಯಿಂದ ಅಂತಿಮ ಸ್ಪರ್ಶ ಪಡೆಯುತ್ತಿದ್ದಾನೆ.

ಕಸ್ತೂರ್ಬಾ ನಗರ ನಿವಾಸಿ ಹಿರಿಯ ಕಲಾವಿದ ಸೋಮನಾಥ ಚಿಟ್ಪಾಡಿ ಅವರು ಮಣ್ಣಿನಿಂದ ಕಡೆಗೋಲು ಕೃಷ್ಣನ ಮೂರ್ತಿಯನ್ನು ರೂಪಿಸುತ್ತಿದ್ದಾರೆ. ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂಭ್ರಮಕ್ಕೆ ಮಣ್ಣಿನ ಒಂಬತ್ತು ಇಂಚಿನ ಕೃಷ್ಣನ ಮೂರ್ತಿಯನ್ನು ಸಿದ್ಧಪಡಿಸುತ್ತಿರುವ ಅವರು, ಈ ಬಾರಿಯೂ ಭಕ್ತಿ ಹಾಗೂ ಕಲೆಯ ಸಮ್ಮಿಲನದ ಪ್ರತೀಕವಾಗಿರುವ ಮೂರ್ತಿಗೆ ಅಂತಿಮ ರೂಪ ನೀಡುತ್ತಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಆಚರಣೆಯಲ್ಲಿ ಮಣ್ಣಿನಿಂದ ನಿರ್ಮಿಸಲಾದ ಕಡೆಗೋಲು ಕೃಷ್ಣನ ಮೂರ್ತಿಗೆ ವಿಶೇಷ ಮಹತ್ವವಿದೆ. ಚಾತುರ್ಮಾಸ ಅವಧಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗರ್ಭಗುಡಿಯಲ್ಲಿರುವ ಉತ್ಸವ ಮೂರ್ತಿಯನ್ನು ಹೊರಗೆ ತಂದು ಪೂಜಿಸುವ ಪದ್ಧತಿ ಇಲ್ಲ. ಹೀಗಾಗಿ ಪರ್ಯಾಯವಾಗಿ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ, ಅದನ್ನೇ ಶ್ರೀಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂದರ್ಭದಲ್ಲಿ ಪೂಜಿಸಲಾಗುತ್ತದೆ.

ಸೋಮನಾಥ ಚಿಟ್ಪಾಡಿ ಅವರು ಕಳೆದ 26 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂಭ್ರಮಕ್ಕಾಗಿ ಮೃಣ್ಮಯ ಕೃಷ್ಣನ ಮೂರ್ತಿಯನ್ನು ಸೇವಾರೂಪದಲ್ಲಿ ರಚಿಸಿಕೊಡುತ್ತಿದ್ದಾರೆ. ಅಷ್ಟಮಿಗೆ ಒಂದು ವಾರವಿರುವಾಗಲೇ ಆವೆ ಮಣ್ಣನ್ನು ತಂದು ಅದನ್ನು ಹದಗೊಳಿಸಿ ಮೂರ್ತಿಯನ್ನು ರಚಿಸಲಾಗುತ್ತದೆ. ಈಗ ಆವೆ ಮಣ್ಣಿನ ಕೊರತೆಯೂ ಕಾಡುತ್ತಿದ್ದು, ಮಣ್ಣಿಗೂ ಚಿನ್ನದ ಬೆಲೆ ಬಂದಿದೆ. ಒಂದು ಲೋಡ್ ಮಣ್ಣಿಗೆ ಹತ್ತು ಸಾವಿರ ರೂಪಾಯಿ ತೆರಬೇಕಾಗುತ್ತದೆ ಎನ್ನುತ್ತಾರೆ ಕಲಾವಿದ ಸೋಮನಾಥ ಅವರು. ಆದರೆ ಶ್ರೀಕೃಷ್ಣನಿಗೆ ಸೇವಾರೂಪದಲ್ಲಿ ಮೃಣ್ಮಯ ಮೂರ್ತಿಯನ್ನು ನಿರ್ಮಿಸಿಕೊಡುತ್ತಿದ್ದಾರೆ. ಭಗವಂತ ಕೊಟ್ಟ ಕಲೆಯ ಮೂಲಕ ಮೃಣ್ಮಯ ಮೂರ್ತಿ ರಚಿಸುವ ಮೂಲಕ ಭಗವಂತನಿಗೊಂದು ಕಲಾ ಸೇವೆ ಅರ್ಪಿಸಿ ಕೃತಾರ್ಥರಾಗುತ್ತಾರೆ.

ಮಣ್ಣಿಗೆ ರೂಪ ನೀಡುವ ಅವರ ಕೈಚಳಕದಲ್ಲಿ ಕೃಷ್ಣನ ಬಾಲಲೀಲೆ ಹಾಗೂ ದೈವಿಕ ಭಾವ ಮೂಡಿಬರುತ್ತಿದ್ದು, ಮಠದ ಅಷ್ಟಮಿ ಆಚರಣೆಯ ಅವಿಭಾಜ್ಯ ಭಾಗವಾಗಿ ಅವರ ಕಲಾಸೇವೆ ಗುರುತಿಸಿಕೊಂಡಿದೆ. ಮಣ್ಣಿಗೆ ಕಲಾತ್ಮಕ ಸ್ಪರ್ಶ ನೀಡಿ, ಅದನ್ನು ಆರಾಧನೆಯ ಕೇಂದ್ರಬಿಂದುವಾಗಿಸುವ ಈ ಕಾರ್ಯದಲ್ಲಿ ಕಲಾವಿದನ ಶ್ರಮದ ಜೊತೆಗೆ ಅಪಾರ ಭಕ್ತಿಭಾವವೂ ಅಡಗಿದೆ.

ವರ್ಷದಿಂದ ವರ್ಷಕ್ಕೆ ಕೃಷ್ಣನ ಮೂರ್ತಿಗೆ ರೂಪ ನೀಡುತ್ತಾ ಬಂದಿರುವ ಸೋಮನಾಥ ಚಿಟ್ಪಾಡಿ ಅವರ ಸೇವೆ, ಉಡುಪಿಯ ಕೃಷ್ಣಭಕ್ತಿಯ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಅಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಸುತ್ತಮುತ್ತ ಭಕ್ತರ ಸಂಭ್ರಮ ಹೆಚ್ಚಾಗುತ್ತಿದ್ದು, ಮಣ್ಣಿನ ಕೃಷ್ಣನ ಮೂರ್ತಿಯ ಅಂತಿಮ ಸಿದ್ಧತೆಯೂ ಪೂರ್ಣಗೊಳ್ಳುತ್ತಿದೆ. ಗುರುವಾರ ಸಂಜೆ ಆರು ಗಂಟೆ ವೇಳೆ ಈ ಮೃಣ್ಮಯ ಕೃಷ್ಣನನ್ನು ಕೃಷ್ಣಮಠಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ಉಡುಪಿಯ ಅಷ್ಟಮಿ ಸಂಭ್ರಮ ಮತ್ತಷ್ಟು ಕಳೆಗಟ್ಟಲಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading